ಕ್ಯಾಥರೀನ, ಡ ಸೀಯೆನ
1347-1380. ಇಟಲಿಯ ಕ್ರೈಸ್ತ ಸಂನ್ಯಾಸಿನಿ. ಹುಟ್ಟಿದ್ದು ಸೀಯೆನದಲ್ಲಿ. ಜಾಕೊಪೊ ಬೆನಿನ್‍ಕಾಸ ಎಂಬ ಬಣ್ಣಗಾರನ ಮಗಳು. ಚಿಕ್ಕಂದಿನಲ್ಲೇ ದಿವ್ಯದರ್ಶನ ಪಡೆದು 1363ರಲ್ಲಿ ಡೊಮಿನಿಕನ್ ಪಂಥದ ಸಂನ್ಯಾಸಿನಿಯಾದಳು. ಈಕೆ ತನ್ನ ಡಯಲಾಗ್ ಅಂಡ್ ಎ ಟ್ರೀಟೈಸ್ ಆಫ್ ಡಿವೈನ್ ಪ್ರಾವಿಡೆನ್ಸ್ ಕೃತಿಯಿಂದ ಹಿರಿಯ ಅನುಭಾವಿ ಎನಿಸಿಕೊಂಡಳು. ಮಾನವತೆಯ ಪ್ರೇಮವೇ ದೇವರನ್ನು ಒಲಿಸಿಕೊಳ್ಳುವ ದಾರಿಯೆಂದು ನಂಬಿದ ಈಕೆ ಧರ್ಮಪ್ರಚಾರಕ್ಕಾಗಿ ನಿರಂತರವಾಗಿ ದುಡಿದಳು. ಪಂಡಿತರು, ಪಾಮರರು, ಧರ್ಮಾಧಿಕಾರಿಗಳು ಮೊದಲಾದವರಿಗೆ ಈಕೆ ಬರೆದ ನಾಲ್ಕು ನೂರು ಪತ್ರಗಳು ಇವಳ ಧರ್ಮದೃಷ್ಟಿ ಮತ್ತು ಮಾನವತಾ ಪ್ರೇಮಗಳಿಗೆ ಪ್ರತೀಕಗಳಾಗಿವೆ. 14ನೆಯ ಶತಮಾನದ ಇಟಲಿಯ ಗದ್ಯಶೈಲಿಯ ಲಯ, ಗತಿಗಳ ಮಿಂಚನ್ನು ಈ ಪತ್ರಗಳಲ್ಲಿ ಕಾಣಬಹುದು. ರೋಮಿನಲ್ಲಿ ಈಕೆ ಸತ್ತಳು. 								  		(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ